ಕೈಸಿಸ್

ಒಂದು ಜಾತಿಯ ಆರ್ಕಿಡ್ ಸಸ್ಯ.  ಮೆಕ್ಸಿಕೋದಿಂದ ವೆನeóÉ್ವೀಲವರೆಗಿನ ವ್ಯಾಪಕ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಸುಂದರವಾದ, ಸುವಾಸನಾಯುಕ್ತವಾದ ಹಾಗೂ ಗಿಡದ ಮೇಲೆಯೇ ಬಹಳ ಕಾಲ ಇರುವ ಹೂಗಳನ್ನು ಪಡೆದಿರುವುದರಿಂದ ಕೈಸಿಸನ್ನು ಉದ್ಯಾನಗಳಲ್ಲಿ ಅಲಂಕಾರ ಸಸ್ಯವನ್ನಾಗಿ ಬೆಳೆಸುತ್ತಾರೆ.  ಸ್ವಾಭಾವಿಕವಾಗಿ ಇದೊಂದು ಅಪ್ಪು ಸಸ್ಯ (ಎಪಿಫೈಟ್).  ಕೆಲವೊಮ್ಮೆ ಶಿಲಾಸಸ್ಯವಾಗಿ (ಲಿತೋಫೈಟ್) ಬೆಳೆಯುವುದೂ ಉಂಟು.

	ಇಳಿಬಿದ್ದಿರುವ ದಪ್ಪನೆಯ ರಸಭರಿತವಾದ ಮತ್ತು ಗದೆಯಾಕಾರದ ಮಿಥ್ಯಾಲಶುನಗಳೂ (ಸ್ಯೂಡೋ ಬಲ್ಬ್ಸ್) ಒಂದೊಂದು ಗೆಣ್ಣಿನಿಂದ ಒಂಟಿಯಾಗಿ ಮೂಡುವ ಎಲೆಗಳೂ ಮೇಣದಂಥ ವಸ್ತುವಿನಿಂದ ಲೇಪವಾದ ಹೂಗಳೂ ಹೊಸ ರೆಂಬೆಗಳಿಂದ ಹಟ್ಟುವ ಪುಟ್ಟಗಾತ್ರದ ರೇಸೀಮ್ ಹೂ ಗೊಂಚಲುಗಳೂ ಕೈಸಿಸ್ ಗಿಡದ ಮುಖ್ಯ ಲಕ್ಷಣಗಳು.  ಪುಪ್ಪಪತ್ರಗಳು ಮತ್ತು ದಳಗಳು ಹೆಚ್ಚು ಕಡಿಮೆ ಬಟ್ಟಲಿನಂತಿವೆ.  ದಳಗಳ ಬಣ್ಣ ಹಳದಿ ಇಲ್ಲವೆ ಬಿಳಿ.  ಅಲ್ಲಲ್ಲಿ ಕಂದು, ಕೆಂಪು, ಊದಾ ಮುಂತಾದ ಬಣ್ಣಗಳ ಚುಕ್ಕೆ ಇಲ್ಲವೆ ಗೆರೆಗಳು ಇವೆ.  ಇದರಿಂದಾಗಿ ಹೂ ಬಲು ಚೆಲುವಾಗಿ ಕಾಣುತ್ತದೆ. ಒಂದು ದಳ ದಪ್ಪನೆಯ ಹೂದುಟಿಯಾಗಿ (ಲೇಬೆಲಮ್) ಮಾರ್ಪಟ್ಟಿದೆ.  ಇದಕ್ಕೆ ದಳಗಳಿಗಿಂತ ಭಿನ್ನವಾದ ಬಣ್ಣವಿದೆಯಾಗಿ ಹೂವಿನ ಅಂದ ಹೆಚ್ಚುತ್ತದೆ.

	ಕೈಸಿಸ್‍ನಲ್ಲಿ ಸುಮಾರು 6 ಪ್ರಭೇದಗಳಿವೆ.  ಇವುಗಳಲ್ಲಿ ಆರಿಯ, ಲೀವಿಸ್ ಮತ್ತು ಚೆಲ್ಸೋನಿಯೈ ಎಂಬುವು ಹಳದಿ ಹೂ ಬಿಡುವಂಥವು.  ಬ್ರಾಕ್ಟೆಸೆನ್ಸ್, ಲಿಮಿಂಗಿಯೈ ಮತ್ತು ಸೆಡೆನಿಯೈ ಎಂಬ ಇತರ ಪ್ರಭೇದಗಳಲ್ಲಿ ಬಿಳಿಯ ಬಣ್ಣದ ಹೂಗಳು ಅರಳುತ್ತವೆ.  ಎಲ್ಲ ಪ್ರಭೇದಗಳನ್ನೂ ತೂಗುಕುಂಡಗಳಲ್ಲಿ ಇಲ್ಲವೇ ಬುಟ್ಟಿಗಳಲ್ಲಿ ಬೆಳೆಸಲಾಗುತ್ತದೆ.  ಕೈಸಿಸ್ ಸಹಜವಾಗಿ ಅಪ್ಪುಸಸ್ಯವಾದ್ದರಿಂದ ಅದನ್ನು ಹೀಗೆ ಬೆಳೆಸುವುದೇ ಒಳ್ಳೆಯದು.  ಗಿಡದಿಂದ ವಿಪುಲವಾಗಿ ಕವಲೊಡೆದಿರುವ ಚೂಷಕ ಬೇರುಗಳು ಹೊರಟು ಗಾಳಿಯಲ್ಲಿ ಇಳಿಬಿದ್ದು ಗಾಳಿಯಿಂದ ನೇರವಾಗಿ ತೇವವನ್ನು ಹೀರುತ್ತವೆ.  ಕೈಸಿಸ್‍ನ ಉತ್ತಮ ಬೆಳೆವಣಿಗೆಗೆ ಬುಟ್ಟಿ ಇಲ್ಲವೇ ಕುಂಡಗಳಲ್ಲಿ ನೀರು ಸರಾಗವಾಗಿ ಇಳಿದುಹೋಗುವಂತಿರಬೇಕು.  ಆದ್ದರಿಂದ ನೀರಿನ ಚಲನೆಗೆ ಅನುಕೂಲವಾಗಿರುವ ಆಸ್ಮಂಡ ಇಲ್ಲವೇ ಬೇರಾವುದಾದರೂ ಫರ್ನ್‍ಸಸ್ಯದ ಕಾಂಡದ ತುಂಡುಗಳನ್ನು ಕಾಂಪೋಸ್ಟ್ ಗೊಬ್ಬರದೊಂದಿಗೆ ಸೇರಿಸಿ ಕುಂಡಗಳಲ್ಲಿ ತುಂಬಿ ಗಿಡಗಳನ್ನು ನೆಡಬೇಕು.  ಹೂ ಚೆನ್ನಾಗಿ ಅರಳಲು ಹದವಾದ ಬಿಸಿಲು ಇರುವಂಥ ಸ್ಥಳಗಳಲ್ಲಿ ಕುಂಡಗಳನ್ನು ತೂಗುಹಾಕಬೇಕು.  ಬಿಸಿಲು ತೀವ್ರವಾಗಿ ಗಿಡ ಸುಟ್ಟು ಹೋಗದಂತೆ ಎಚ್ಚರವಹಿಸಬೇಕು.  ಗಿಡ ಇನ್ನೂ ಬೆಳೆಯುತ್ತಿರುವಾಗ ಯಥೇಚ್ಛವಾಗಿ ನೀರು ಹಾಕಬೇಕು.  ಮಿಥ್ಯಾಲಶುನಗಳು ಪೂರ್ಣವಾಗಿ ರೂಪುಗೊಂಡಮೇಲೆ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ ತಂಪಾದ ಸ್ಥಳಕ್ಕೆ ಕುಂಡಗಳನ್ನು ಸ್ಥಳಾಂತರಿಸಬೇಕು. ಅತ್ಯವಶ್ಯವಾದಾಗ ಮಾತ್ರ ಕೈಸಿಸ್ ಗಿಡಗಳನ್ನು ಬದಲಿ ಕುಂಡಗಳಿಗೆ ಹಾಕಬೇಕು. ಹಾಗಲ್ಲದೆ ಪದೇ ಪದೇ ಕುಂಡಗಳನ್ನು ಬದಲಿಸಿದರೆ ಗಿಡದ ಬೆಳೆವಣಿಗೆ ಕುಂಠಿತವಾಗುತ್ತದೆ.
(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ